ಕನ್ನಡ ನಾಡು | Kannada Naadu

 ದಣಿವರಿಯದ ಸವ್ಯಸಾಚಿ ಕಲಾವಿದನಿಗೆ  ವೇಷ ಕಳಚುವಾಗಲೇ ಜವರಾಯನ ಕರೆ. 

02 May, 2024

 
ಮಂಗಳೂರು: ತೆಂಕು ಯಕ್ಷಗಾನ ವಲಯದಲ್ಲಿ ಸವ್ಯಸಾಚಿ ಎಂದು ಕರೆಸಿಕೊಂಡ ಗಂಗಾಧರ ಪುತ್ತೂರರು ವೇಷ ಕಳಚುವಾಗಲೇ ಈ ಲೋಕದ ಯಾತ್ರೆಗೆ ಪೂರ್ಣವಿರಾಮ ಹಾಕಿದ್ದಾರೆ. 59 ವರ್ಷ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು  ಅವರು ಕಳೆದ  42 ವರ್ಷಗಳಿಂದ ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ತನ್ನ ಕಲಾ ಸೇವೆ ಮುಂದುವರೆಸಿದ್ದರು. 
 
           ಉಡುಪಿ ಜಿಲ್ಲೆಯ ಕೋಟದಲ್ಲಿ ಹಮ್ಮಿಕೊಳ್ಳಲಾದ  ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿದ ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ರಂಗಸ್ಥಳದಲ್ಲಿ ತನ್ನ ಪಾತ್ರ ನಿರ್ವಹಣೆ ಮುಗಿಸಿ, ಚೌಕಿಗೆ ಬಂದು ವೇಷ ಕಳಚುವ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೋಟ ಗಾಂಧಿ ಮೈದಾನದಲ್ಲಿ ನಡೆದ ಯಕ್ಷಗಾನದಲ್ಲಿ ʻಧರ್ಮಸ್ಥಳ ಕ್ಷೇತ್ರ ಮಹಾತ್ಮೆʼ ಪ್ರಸಂಗದ ʻಕುಕ್ಕಿತ್ತಾಯʼನ ವೇಷ ಮುಗಿಸಿದ್ದರು. ಎಂದಿನಂತೆ ಎಲ್ಲರೊಂದಿಗೂ ಮಾತನಾಡುತ್ತ ಇದ್ದ ಗಂಗಾಧರ ಅವರು  ಚೌಕಿಗೆ ಮರಳಿ ತಾನು ತೊಟ್ಟ ವೇಷವನ್ನು ಬಿಡಿಸಿ, ಆಭರಣಗಳನ್ನು ಕಳಚಿ, ತಲೆಗೆ ಕಟ್ಟಿದ ಕಿರೀಟ  ಬಿಚ್ಚಿ, ಮುಖವರ್ಣಿಕೆಯನ್ನು ತೆಗೆಯುವ ವೇಳೆ ತೀವ್ರ ಹೃದಯಾಘಾತದಿಂದ ನಿಧನರಾದರು.  ಧರ್ಮಸ್ಥಳ ಮೇಳದ ಚೌಕಿಯಲ್ಲಿ ಮಂಗಳ ಪದ ಆಗುತ್ತಿದ್ದ ಆ ಕ್ಷಣದಲ್ಲಿ ಈ ಘಟಣೆ ನಡೆದಿದ್ದು, ಅರೇ ಕ್ಷಣದಲ್ಲಿ ಲೋಕದ ಯಾತ್ರೆ ಮುಗಿಸಿಬಿಟ್ಟಿದ್ದಾರೆ. 
                

                       1964ನೇ ಇಸ್ವಿ ಆಗಸ್ಟ್ 12ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ನಾರಾಯಣಯ್ಯ ಮತ್ತು ಲಕ್ಷ್ಮಿ ಅಮ್ಮ ದಂಪತಿಗೆ ಪುತ್ರನಾಗಿ ಜನಿಸಿದ ಗಂಗಾಧರ ಜೋಗಿಯವರು ಕೋಡಿಂಬಾಡಿ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ ಅವರಿಗೆ, ಎಳವೆಯಲ್ಲೇ  ಯಕ್ಷಗಾನಾಸಕ್ತಿ ಅತೀವವಾಗಿತ್ತು. ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ 1981ರಲ್ಲಿ ತರಬೇತಿ ಪಡೆದು ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾದರು. ಬಾಲಗೋಪಾಲ ವೇಷದಿಂದ ಹಿಡಿದು ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದವರು.  
                    ಯಕ್ಷಗಾನದ ಯಾವೂದೇ ಪಾತ್ರಕ್ಕೂ ಜೀವ ತುಂಬುವ ಸಾಮರ್ಥ್ಯ ಇರುವ ಗಂಗಾಧರರು  ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿಣಿ, ಪ್ರಮೀಳೆ, ಶ್ರೀದೇವಿ, ಸೀತೆ, ದೇವೇಂದ್ರ, ದುಶ್ಯಾಸನ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ತನ್ನ ಛಾಪು ಮೂಡಿಸಿದ್ದರು. ಅದರ ಜೊತೆಗೆ ಹಾಸ್ಯದ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವಲ್ಲಿ ನಿಸ್ಸಿಮರಾಗಿದ್ದರು.  ಕಸೆ ಸ್ತ್ರೀವೇಷ, ಗರತಿ ವೇಷಗಳು ಅಲ್ಲದೆ ಶೃಂಗಾರ ವೇಷಗಳಲ್ಲಿ ಮಿಂಚಿದ ಇವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವ ಕಲೆಯು ಕರಗತವಾಗಿದೆ. 
                    ಗಂಗಾಧರ ಪುತ್ತೂರು ಅವರು ಧರ್ಮಸ್ಥಳ ಮೇಳದ ದಣಿವರಿಯದ ಕಲಾವಿದರಾಗಿದ್ದರು. ಪ್ರಧಾನ ಭಾಗವತರು ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡಿ ಪೂರೈಸುತ್ತಿದ್ದವರು. ಒಂದು ಪ್ರದರ್ಶನದಲ್ಲಿ ಎಷೇ ವೇಷಗಳ ಜವಾಬ್ದಾರಿ ಕೊಟ್ಟರೂ ಮಾಡಬಲ್ಲ ಕ್ಷಮತೆ ಅವರಲ್ಲಿ ಇತ್ತು.  ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಸೈ. ಹೆಣ್ಣು ಬಣ್ಣಗಳನ್ನೂ ಅಂದವಾಗಿ ನಿರ್ವಹಿಸಬಲ್ಲ ತಾಕತ್ತು ಅವರಲ್ಲಿತ್ತು. ಹಿರಿಯ ಕಲಾವಿದನಾದರೂ ಅಗತ್ಯ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸಿ ಯಕ್ಷಲೋಕದಲ್ಲಿ ದೊಡ್ಡತನ  ಮೆರೆದವರು.
ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ʻಕುಂಬಳೆ ಸುಂದರ ರಾಯಯʼ ʻಗೋವಿಂದ ದೀಕ್ಷಿತʼ ಪಾತ್ರದೊಂದಿಗೆ ಗಂಗಾಧರರ  ʻಮಾಲತಿʼ ಪಾತ್ರ ಬಹಳ ಹೆಸರುಮಾಡಿತ್ತು.  ಗಂಗಾಧರ ಪುತ್ತುರು ಅವರು ಪತ್ನಿ ಕುಶಾಲಾಕ್ಷಿ, ಪುತ್ರ ಜ್ಞಾನೇಶ್, ಸೇರಿದಂತೆ ಅನೇಕ ಬಂಧು ಬಳಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಿರಿಯ ಸವ್ಯಸಾಚಿ ಕಲಾವಿದರಾಗಿದ್ದ ಅವರ ಅಕಾಲಿಕ ಮತ್ತು ಅನಿರೀಕ್ಷಿತ ಸಾವಿಗೆ ಯಕ್ಷಗಾನ ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ದೆಹಲಿ ರಾಷ್ಟ್ರಪತಿ ಭವನ, ದುಬೈ, ಬೆಹರಿನ್, ಅಬುದಾಭಿ ಮೊದಲಾದೆಡೆ ಪ್ರದರ್ಶನಗಳಲ್ಲಿ ಭಾಗವಹಿಸಿದ್ದ ಪುತ್ತುರರು. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 26 ವರ್ಷ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲಿ ನಿರಂತರ ಭಾಗ ವಹಿಸುತ್ತಲೇ ಬಂದಿದ್ದರು.  ಅವರ ಪ್ರಾಮಾಣಿಕ ಯಕ್ಷ  ಸೇವೆಯನ್ನು ಗುರುತಿಸಿ ಧರ್ಮಸ್ಥಳ ಮೇಳದ ಯಜಮಾನರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ಸನ್ಮಾನಿಸಿದ್ದು ನೆನಪಿಸಿಕೊಳ್ಳಬೇಕು.
 
 
 
 
 
 
 
 
 

Publisher: ಕನ್ನಡ ನಾಡು | Kannada Naadu

Login to Give your comment
Powered by